ಪಟಿಕ ಜೇಡುಶಿಲೆ -
ಪಟಿಕ ಸೇರಿರುವ ಕಪ್ಪು ಜೇಡುಶಿಲೆ.  ಇದರಲ್ಲಿ ಹಲವು ವೇಳೆ ಉಂಡೆ ಆಕಾರಗಳೂ ಪಟ್ಟೆ  ಪಟ್ಟೆಯ ಕಪ್ಪು ಸುಣ್ಣಶಿಲೆಗಳೂ ಕಂಡುಬರುವುದುಂಟು. ಈ ಶಿಲೆಗಳು ಹೆಚ್ಚು ಕಡಿಮೆ ಬಿಟುಮೆನ್‍ಯುಕ್ತವಾಗಿರುತ್ತವೆ.  ವಾಸ್ತವವಾಗಿ ಪಟಿಕ ಜೇಡುಶಿಲೆ ಕೊಳೆತ ವಸ್ತು. ಇದು ಆಳವಿಲ್ಲದ (ತೆಟ್ಟೆ) ಕಡಲುಗಳಲ್ಲಿ (ಆಮ್ಲಜನಕ ರಹಿತ) ಅವಾಯ್ವಣುಕ್ಷಯದಿಂದ ಉತ್ಪತ್ತಿಯಾಗುವುದು.  ಈ ಶಿಲೆಗಳಲ್ಲಿ ಮೊರೆನಿಯ ತರಹದ ಶೈವಾಲಗಳು (ಆಲ್ಗೆ) ಮತ್ತು ಹಲವು ವೇಳೆ ಪೆರೈಟ್ ಯುಕ್ತವಾದ ಜೀವ್ಯವಶೇಷಗಳೂ ಇರುತ್ತವೆ.  ಇವುಗಳಲ್ಲಿರುವ ಅಯೋಡಿನ್‍ಅಂಶ ಇವು ಶೈವಾಲಗಳಿಂದ ಉತ್ಪತ್ತಿಯಾದವು ಎನ್ನುವುದಕ್ಕೆ ಆಧಾರವಾಗಿದೆ. ಅದೇ ರೀತಿ ಬೋರಾನ್ ಪ್ರಮಾಣ ಶೇಕಡ 0.014-0.045 ಅಂಶ (ಆಕ್ಸೈಡ್ ರೂಪದಲ್ಲಿ) ಇರುವುದರಿಂದ ಲಾಂಡರ್‍ಗ್ರೆನ್ ಎಂಬಾತ ಈ ನಿಕ್ಷೇಪಗಳು ಉಪ್ಪುನೀರಿನ ಸಾಗರನಿಕ್ಷೇಪಕಗಳೆಂದು ಹೇಳಿರುವನು.  ಸ್ವೀಡನ್ನಿನ ಪಟಿಕ ಜೇಡುಶಿಲೆಗಳಲ್ಲಿ ಮೊಲಿಬ್ಡಿನಮ್ ಮತ್ತು ಟಂಗ್ಸ್ಟನ್ ಖನಿಜಗಳೂ ಇವೆ.  ದಕ್ಷಿಣ ಸ್ವೀಡನ್ನಿನಲ್ಲಿರುವ ಪಟಿಕ ಜೇಡುಶಿಲೆಗಳಲ್ಲಿ ಯುರೇನಿಯಮ್ ಹೆಚ್ಚಿನ  ಮೊತ್ತದಲ್ಲಿ (1%) ಇರುವುದು ; ತೋರಿಯಮ್ ಪ್ರತಿ ಮಿಲಿಗ್ರಾಮಿಗೆ 0.6-2 ಭಾಗದಷ್ಟು ಇರುವುದೆಂದು ಕಂಡು ಬಂದಿದೆ.  ಆದರೆ ಸಾಮಾನ್ಯ ಪಟಿಕ ಜೇಡುಶಿಲೆಯಲ್ಲಿ ಪ್ರತಿ 1,000 ಕಿಲೋಗ್ರಾಮಿಗೆ 50-100 ಗ್ರಾಮ್ ಯುರೇನಿಯಮ್ ಇರುವುದು.  ಕೋಮ್ ಎಂಬ ಒಂದು ಬಗೆಯ ಪಟಿಕ ಜೇಡುಶಿಲೆಯ ವಯಸ್ಸನ್ನು ಸೀಸ ಮತ್ತು ಯುರೇನಿಯಮ್ ಪ್ರಮಾಣದಿಂದ ಅಳತೆಮಾಡಿ ಅದು ಸುಮಾರು 440 ಮಿಲಿಯನ್ ವರ್ಷಗಳೆಂದು ನಿರ್ಧರಿಸಿದ್ದಾರೆ.  ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ವಯಸ್ಸು ಶೇಕಡ 15 ರಷ್ಟು ಹೆಚ್ಚೆಂದೂ ತಿಳಿದು ಬಂದಿದೆ.

	ಜರ್ಮನಿಯಲ್ಲಿ, ಕೆಳಗಿನ ಜೆಕ್‍ಸ್ಟೈನ್ (ಪರ್ಮಿಯನ್) ಕಾಲದ ಶಿಲೆಗಳು ಸಸ್ಯಾಂಗಾರ ಮತ್ತು ಹೇರಳವಾದ ಮೀನುಗಳ ಅವಶೇಷವಿರುವ ಸ್ವೀಡನ್ನಿನ ಪಟಿಕ ಜೇಡುಶಿಲೆಗಳನ್ನು ಹೋಲುವುವು.  ಆದರೆ ಯುರೇನಿಯಮ್, ತಾಮ್ರದ ಸಲ್‍ಫೈಡ್ ಮತ್ತು ಮೊಲಿಬ್ಡಿನಮ್ ಅಂಶದಲ್ಲಿ ವ್ಯತ್ಯಾಸವಾಗಿ ಈ ಶಿಲೆಗಳ ರಾಸಾಯನಿಕ ಸಂಯೋಜನೆಯೂ ಬದಲಾವಣೆ ಆಗಿದೆ.

	ಜೇಡುಶಿಲೆಗಳಲ್ಲಿ ಹರಡಿರುವ ಜಲಜನಿತ ಸ್ವರ್ಣ ಮಕ್ಷಿಕಾ (ಪೈರೈಟೆಸ್) ಖನಿಜ ಕೊಳೆಯುವಿಕೆಯಿಂದ ಪಟಿಕ ಜೇಡುಶಿಲೆಗಳಾಗುವುವು.  ಅಂದರೆ ಈ ಖನಿಜಗಳಲ್ಲಿರುವ ಸಲ್ಫೈಡ್ ವಾತಾವರಣ ಶಿಥಿಲೀಕರಣದಿಂದಾಗಿ ಮತ್ತು ಅಂತರ್ಜಲದ ಕಾರ್ಯ ಚಟುವಟಿಕೆಯಿಂದ ಆಕ್ಷೈಡುಗಳಾಗಿ ಅನಂತರ ಸಲ್ಫೇಟುಗಳಾಗುವುವು.  (ಜಿಪ್ಸಮ್ ಮತ್ತು ಪಟಿಕ).  ಈ ರೀತಿ ನಡೆಯವು ಕಾರ್ಯಾಚರಣೆಗೆ ಸ್ಕಾಂಡಿನೇವಿಯ (ಷೀಲ್ಡ್)  ಪುರಾತನ ಭೂಭಾಗದ ಸುತ್ತ ಮಧ್ಯಕೇಂಬ್ರಿಯನ್ ಕಾಲದಿಂದಲೂ ನಿಕ್ಷೇಪಗೊಂಡಿರುವ ಶಿಲೆಗಳು ಉತ್ತಮ ಉದಾಹರಣೆ.
(ಎಂ.ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ